Saturday, May 20, 2017

NASA ದ ಬುಡಕ್ಕೆ ಬೆಂಕಿ ಇಟ್ಟ ಪೋರ !!!


 ಜನವರಿ 26ರ  ಮುಂಜಾನೆ ಬೆಚ್ಚಗೆ ಮಲಗಿದ್ದ ಜೇಮ್ಸ್ ಇನ್ನು ಇದ್ದಿರಲಿಲ್ಲ . ಕೊನೆಯ ಹೊರಗೆ ತಾಯಿ ಕೂಗುವುದನ್ನು ಕೇಳಿ ಎಚ್ಚರಗೊಂಡ . ತಾಯಿ ಹೊರಗೆ ಯಾರೋ ನಿನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿದಾಗ ,ಏನೊಂದು ಅರ್ಥವಾಗದೆ ಕೋಣೆಯಿಂದ ಹೊರಬಂದ. ಹೊರಬಂದಾಗ ಬಂದೂಕುಧಾರಿ ಪೊಲೀಸರು , FBI (ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ - ಅಮೆರಿಕಾದ ತನಿಖಾ ಸಂಸ್ಥೆ )ಯ ವ್ಯಕ್ತಿಗಳು ಇನ್ನು ಕೆಲವರೊಂದಿಗೆ ನಿಂತಿದ್ದರು. ಆಶ್ಚರ್ಯಚಕಿತನಾದ ಜೇಮ್ಸ್ , ಏಕೆಂದರೆ ಆಗ ಅವನಿಗೆ ಕೇವಲ ಹದಿನಾರು ವರ್ಷಗಳು. ನಾಸಾ (NASA) ದ  ಬಟ್ಟೆ ತೊಟ್ಟ ಕೆಲವು ಜನರನ್ನು ಕಂಡಾಗ ಅವನಿಗೆ ವಿಷಯ ಏನೆಂದು ಹೊಳೆಯಿತು. ರಾಕೆಟ್ ನ ಬುಡಕ್ಕೆ ಬೆಂಕಿ ಇಡುವ ನಾಸಾದ ಬುಡಕ್ಕೆ ಈತ ಬೆಂಕಿ ಹಚ್ಚಿದ !!!.



ಅದು ಆಗಸ್ಟ್ 1999 ರ ಸಮಯ, ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಕೆಲವು ತಂತ್ರಜ್ಞರಿಗೆ ಏನೋ ಎಡವಟ್ಟಾದ ಸೂಚನೆ ಸಿಕ್ಕಿತ್ತು. ಅವರ ಕಂಪ್ಯೂಟರ್ಗಳಿಗೆ  ಹೊರಗಿನವರಾರೋ ಪ್ರವೇಶಿಸಿದ್ದಾರೆ ಹಾಗು ಕೆಲವು ದಾಖಲೆಗಳು ಕಳವಾಗಿದೆ. ಇದು ಸಾಮಾನ್ಯ ಸಂಗತಿ ಆಗಿರಲಿಲ್ಲ. ಅಲ್ಲಿರುವ ಕಂಪ್ಯೂಟರ್ಗಳು ಉಪಗ್ರಹ ಸಂವಹನ , ನಿಯಂತ್ರಣ ಕೆಲಸಕ್ಕೆ ಮೀಸಲಿರಿಸಿರುವಂತಹದು.  ಹೊರಗಿನಿಂದ ಒಂದು ಹುಳು ಸಹ ನಾಸಾ ಕೇಂದ್ರಕ್ಕೆ ಪ್ರವೇಶ ಮಾಡುವುದು ಕಷ್ಟವಿತ್ತು. ಅಂತಹದ್ದರಲ್ಲಿ ಮೇಧಾನಿ ವಿಜ್ಞಾನಿಗಳಿದ್ದ ಸಂಸ್ಥೆಯ  ಕಂಪ್ಯೂಟರ್ಗೆ ಯಾರೋ ಕನ್ನ ಕೊರೆಯುವುದೆಂದರೇನು?.  ಕೊನೆಗೆ ಮೂರು ವಾರಗಳ ಕಾಲ ಆ ಕಂಪ್ಯೂಟರ್ಗಳನ್ನು ಸ್ಥಗಿತಗೊಳಿಸಿ ಕೂಲಂಕುಷ ತನಿಖೆಗೆ ಒಳಪಡಿಸಿದ್ದರು. ಅಲ್ಲಿಗೆ ಸುಮಾರು 41,000 ಡಾಲರ್ ವೆಚ್ಚವಾಗಿತ್ತು, ತಂತ್ರಜ್ಞರ ತಲೆಯು ಬಿಸಿಯಾಗಿತ್ತು.

ತನಿಖೆಯಿಂದ ತಿಳಿದು ಬಂದದ್ದೇನೆಂದರೆ, ಅಮೆರಿಕಾದ DARA (Defense Threat Reduction Agency) ಎನ್ನುವ ಭದ್ರತಾ ಸಂಸ್ಥೆಯ ಸುಮಾರು ಹತ್ತು ಕಂಪ್ಯೂಟರ್ಗಳನ್ನು ಯಾರೋ ಹ್ಯಾಕ್ ಮಾಡಿದ್ದರು. c0mrade ಎಂಬ ನಾಮದಿಂದ ನೆಟ್ ವರ್ಕ್ ನ ಸುರಕ್ಷತೆಗೆ ಕನ್ನ ಕೊರೆದು ಒಳನುಗ್ಗಿದ ಅವರು, ಉದ್ಯೋಗಿಗಳ ಬಳಕೆದಾರ ಹೆಸರು ಹಾಗು ಪಾಸ್ವರ್ಡ್ ಕದ್ದಿದ್ದರು. ಅಲ್ಲದೆ ಕೆಲವು ಗೌಪ್ಯ ಸಂದೇಶಗಳನ್ನು ಓದಿದ್ದರು . ಇದರಿಂದ ಇನ್ನೊಂದು ಸರ್ಕಾರಿ  ಸಂಸ್ಥೆ ನಾಸಾದ  ಕಂಪ್ಯೂಟರ್ಗೆ ನುಗ್ಗಲು ಸಾಧ್ಯವಾಯಿತು. ಹೀಗೆ ಪ್ರವೇಶ ಪಡೆದ  ನಂತರ ಅಲ್ಲಿದ್ದ ಕೆಲವು ಮಾಹಿತಿಗಳನ್ನು ಕದ್ದಿದ್ದರು. ಇದರಲ್ಲಿ ನಾಸಾದ ನಿಯಂತ್ರಣದಲ್ಲಿರುವ ಬಾಹ್ಯಾಕಾಶ ನಿಲ್ದಾಣದ ಸಾಫ್ಟ್ವೇರ್ ಕೂಡ ಸೇರಿತ್ತು. ಈ ಸಾಫ್ಟ್ವೇರ್ ಬಾಹ್ಯಾಕಾಶ ನಿಲ್ದಾಣದ ಒಳಗಿರುವ ತಾಪಮಾನ , ತೇವಾಂಶ ಮೊದಲಾದ ವಾತಾವರಣ ಸಂಬಂಧಿ ಕೆಲಸಗಳನ್ನು ನಿಯಂತ್ರಿಸುತ್ತಿತ್ತು . ಭಾರಿ ಬೆಲೆಬಾಳುವ ಈ ಸಾಫ್ಟ್ವೇರ್ನ ಸೊರ್ಸ್ ಕೋಡ್( Source Code)  ಕದ್ದ ದುಷ್ಕರ್ಮಿಗಳನ್ನು ಹುಡುಕುವುದು ಅನಿವಾರ್ಯವಾಗಿತ್ತು.



ಜೊನಾಥನ್ ಜೇಮ್ಸ್ 

ಎರಡು ಸಾವಿರನೇ ಇಸವಿಯ ಜನವರಿ 26 ರಂದು  ತನಿಖೆ ಮಾಡುತ್ತಾ ಹೋದ ತನಿಖಾ ಸಂಸ್ಥೆಗಳು ಕೊನೆಗೆ  ನಿಂತದ್ದು ,ಹದಿನಾರು ವರ್ಷದ ಜೊನಾಥನ್ ಜೇಮ್ಸ್ ಮನೆಯ ಮುಂದೆ. ಭಾರಿ ಸುರಕ್ಷತಾ ಕ್ರಮ ಹೊಂದಿದ್ದ ಸಂಸ್ಥೆಯ ಕಂಪ್ಯೂಟರ್ಗೆ 16 ವರ್ಷದ ಪೋರನೊಬ್ಬ ತನ್ನ ಸಾಮಾನ್ಯ ಪೆಂಟಿಯಂ ಆವೃತ್ತಿಯ ಗಣಕ ಬಳಸಿ  ಲಗ್ಗೆ ಇಟ್ಟಿದ್ದ. ಅವನನ್ನು ವಿಚಾರಣೆಗೆ ಒಳಪಡಿಸಿ ಅವನಲ್ಲಿದ್ದ 5 ಕಂಪ್ಯೂಟರ್, ಸಿಡಿಗಳು  ಸೇರಿದಂತೆ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡರು. ವಿಚಾರಣೆ ಮಾಡಿದಾಗ ತನ್ನ ತಪ್ಪನ್ನು ಒಪ್ಪಿಕೊಂಡ . ಇನ್ನು ವಯಸ್ಕನಾಗದ ಕಾರಣ 6 ತಿಂಗಳು ಗೃಹಬಂಧನದಲ್ಲಿ ಇರಿಸಿ, ಕಂಪ್ಯೂಟರ್ನ ಬಳಕೆಯನ್ನು ಪ್ರತಿಬಂಧಿಸಿದರು. ಕೊನೆಗೆ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಿದ್ದರು. 



1983ರಲ್ಲಿ ಹುಟ್ಟಿದ್ದ ಜೇಮ್ಸ್ 6 ವರ್ಷದ ಬಾಲಕನಾಗಿದ್ದಾಗಲೇ ಕಂಪ್ಯೂಟರ್ ಬಳಸಲು ಆರಂಭಿಸಿದ. ಒಮ್ಮೆ ಇವನ ಕಂಪ್ಯೂಟರ್ ಬಳಕೆ ಅತಿಯಾಯಿತೆಂದು , ಇನ್ನು ಕಂಪ್ಯೂಟರ್ ಬಳಸಬಾರದೆಂದು ತಂದೆ ರೇಗಿದಾಗ ರಚ್ಚೆ ಹಿಡಿದು ಮನೆ ಬಿಟ್ಟು ಓದಿ ಹೋಗಿದ್ದ. ಹೀಗೆ ಕಂಪ್ಯೂಟರ್ ಹುಚ್ಚು ಹಿಡಿಸಿಕೊಂಡಿದಾತನಿಗೆ ಯೂನಿಕ್ಸ್ (Unix) ಹಾಗು ಸಿ(C)  ಭಾಷೆಯಲ್ಲಿ ಪರಿಣತಿಯಿತ್ತು. ಇದನ್ನು ನಾಸಾದ ಮೇಲೆ ಪ್ರಯೋಗಿಸಿ ತನ್ನ ಜೀವನವನ್ನು ಹಾಳು ಮಾಡಿಕೊಂಡ.


ಈ ಘಟನೆಯ ನಂತರ ನಡೆದ ಸಂದರ್ಶನದಲ್ಲಿ ಆತ ಹೇಳಿದಿಷ್ಟು '' ನಾಸಾದ ಕಂಪ್ಯೂಟರ್ಗಳು ಸಾಕಷ್ಟು ಸುರಕ್ಷಿತವಾಗಿಲ್ಲೆಂದು ನಾನು ಮೊದಲೇ ಅದರ ಗಣಕ ವಿಭಾಗದ ಮುಖ್ಯಸ್ಥರಿಗೆ ತಿಳಿಸಿದ್ದೆ. ಅವರು ಅದರ ಬಗ್ಗೆ ನಿರ್ಲಕ್ಷ ತೋರಿದ್ದರಿಂದ ನಾನು ಈ ಕೆಲಸ ಮಾಡಿದೆ''. ತಾನು ಕೇವಲ ಕುತೂಹಲಕ್ಕಾಗಿ ಹ್ಯಾಕ್ ಮಾಡಿದ್ದೆಂದು, ಆ ಸಾಫ್ಟ್ವೇರ್ ನ ಸೊರ್ಸ್ ಕೋಡ್ ನ್ನು ಅಧ್ಯಯನಕ್ಕಾಗಿ ಬಳಸಿಕೊಂಡೆನೆಂದು  ಹೇಳಿದ.


ಹೀಗಿರುವಾಗ 2008ನೇ ಜನವರಿ 17 ರಂದು ಅಮೇರಿಕಾದಲ್ಲಿ ಬೃಹತ್ ಸೈಬರ್ ಧಾಳಿ ನಡೆಯಿತು. TJX ಎನ್ನುವ ಗೃಹಪಯೋಗಿ ವಸ್ತು ತಯಾರಿಕಾ ಸಂಸ್ಥೆ, ಬೋಸ್ಟನ್ ಮಾರ್ಕೆಟ್ ,ಆಫೀಸ್ ಮ್ಯಾಕ್ಸ್ ಎನ್ನುವ ಸಂಸ್ಥೆಗಳ ಸರ್ವರ್ಗಳಿಗೆ ದುಷ್ಕರ್ಮಿಗಳು ಧಾಳಿ ನಡಿಸಿದ್ದರು, ಹಾಗು ಈ  ಧಾಳಿಯ ಸಮಯ  ಸರ್ವರ್ಗಳಲ್ಲಿ ಶೇಖರವಾಗಿದ್ದ  ಗ್ರಾಹಕರ ಖಾಸಗಿ ಮಾಹಿತಿ ಹಾಗು ಕ್ರೆಡಿಟ್ ಕಾರ್ಡ್ನ ಮಾಹಿತಿಗಳನ್ನು ಕದ್ದಿದ್ದರು.  ಪೊಲೀಸರು ಮತ್ತೆ ಜೇಮ್ಸ್ ಮೇಲೆ ಸಂದೇಹ ಪಟ್ಟರು ಮತ್ತು ಅವನ ಸಂಬಂಧಿಕರ ಮನೆಗಳ ಮೇಲೂ ಧಾಳಿ ಮಾಡಿದ್ದರು. ಆದರೆ ಜೇಮ್ಸ್ ನ ಪಾಲ್ಗೊಳ್ಳುವಿಕೆ ಬಗ್ಗೆ ಸೂಕ್ತ ಸಾಕ್ಷ್ಯಧಾರಗಳು ದೊರೆಯಲಿಲ್ಲ. ಈ ಘಟನೆಗಳಿಂದ  ಮಾನಸಿಕವಾಗಿ ಕುಗ್ಗಿ ಹೋದ ಜೇಮ್ಸ್ ಕೊನೆಗೆ ಮೇ ಹದಿನೆಂಟು, 2008 ರಂದು ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ಅವನು ಬರೆದಿಟ್ಟ ಆತ್ಮಹತ್ಯಾ ಪತ್ರದಲ್ಲಿ  ಘಟನೆಗೂ ತನಗೂ ಸಂಬಂಧವಿಲ್ಲವೆಂದು , ತನಗೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲವೆಂದು , ನಾನು ಘಟಿಸಿದ ಸಂಗತಿಗಳ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದು, ಆತ್ಮಹತ್ಯೆಯೊಂದೇ ನನಗೆ ಆಯ್ಕೆಯಾಗಿದೆ ಎಂದು ಬರೆದಿದ್ದ . ' TJX ಸೈಬರ್  ಧಾಳಿಯಲ್ಲಿ ಅವನ ಕೈವಾಡವಿರಲಿಲ್ಲ ಮತ್ತು  ಅವನ ಬಳಿ ಸಾಕಷ್ಟು ಹಣವಿರಲಿಲ್ಲ'  ಎಂದು ಅವನ ತಂದೆ ಹೇಳುತ್ತಾರೆ. ಆ ವೇಳೆಗಾಗಲೇ ಜೇಮ್ಸ್, ಕ್ಯಾನ್ಸರ್ ನಿಂದಾಗಿ  ತನ್ನ ತಾಯಿಯನ್ನು ಕಳೆದುಕೊಂಡಿದ್ದ.

ತಪ್ಪಾದ ದಾರಿ ಒಬ್ಬ ಬುದ್ದಿವಂತನನ್ನು ಎಳೆವಯಸ್ಸಿನಲ್ಲೇ ಅವನತಿಗೆ ತಲುಪಿಸಿತು. ಹರೆಯದ ವಯಸ್ಸಿನ ಹುಚ್ಚು ಸಾಹಸವೊಂದು ಅವನ ಬದುಕಿಗೆ ಕೊಳ್ಳಿಯಾಯಿತು . ಇಂದಿಗೂ ಜಗತ್ತು ಅವನನ್ನು ಟಾಪ್-5 ಹ್ಯಾಕರ್ಗಳಲ್ಲಿ ಒಬ್ಬ ಎಂದು ಗುರುತಿಸುತ್ತದೆ.  ಈ ಘಟನೆಗಳ ನಂತರ ಇಂತಹ ಹ್ಯಾಕರ್ಗಳ ಪ್ರತಿಭೆಯನ್ನು(?) ಗುರುತಿಸಿ ಸೈಬರ್ ಭದ್ರತಾ ಸಂಸ್ಥೆಗಳು ಅವರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಂಡಿವೆ. ಕಳ್ಳರ ದಾರಿ ಇನ್ನೊಬ್ಬ ಮಾತ್ರ ಗೊತ್ತು ಅಲ್ಲವೇ ?.

ಮಾಹಿತಿ ಮತ್ತು ಚಿತ್ರಕೃಪೆ ::- ಅಂತರ್ಜಾಲ
                                                                                                        - Tharanatha Sona

Sunday, May 14, 2017

ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ !!!!

                                         ಭಾಗ 1 - ಮ್ಯೂನಿಚ್  ಹತ್ಯಾಕಾಂಡ


ಇಸ್ರೇಲ್ ಕೆಚ್ಚು ಪ್ರತಿಕಾರಕ್ಕೆ ಹೆಸರಾದ ದೇಶ. ಹಮ್ಮುರಭಿಯ '' ಕಣ್ಣಿಗೆ ಕಣ್ಣು , ರಕ್ತಕ್ಕೆ ರಕ್ತ ''ನೀತಿ  ಇನ್ನೆಲ್ಲಿ ಇದೆಯೋ ಗೊತ್ತಿಲ್ಲ. ಆದರೆ ಇಸ್ರೇಲ್ ಮಾತ್ರ ತನ್ನ ಶತ್ರುಗಳನ್ನು ನಿರ್ನಾಮ ಮಾಡುವ ಮೂಲಕ ಇಂದಿಗೂ ಪಾಲಿಸುತ್ತಿದೆ, . ಹಾಲಿವುಡ್ನ ಸಾಹಸ ಸಿನಿಮಾಕ್ಕೆ ಸ್ಪೂರ್ತಿಯಾಗುವ ಕತೆಯೇ ಈ ಲೇಖನ '' ಮ್ಯೂನಿಚ್  ಹತ್ಯಾಕಾಂಡ ''.

ಕ್ರೀಡಾಗ್ರಾಮದಲ್ಲಿರುವ ಧಾಳಿ ನಡೆದ  ಕಟ್ಟಡ 


ಇದು ಶುರುವಾಗುವುದು ಅಂದಿನ ಪಶ್ಚಿಮ ಜರ್ಮನಿ ಆಯೋಜಿಸಿದ 1972 ಒಲಿಂಪಿಕ್ನಿಂದ . ಒಲಿಂಪಿಕ್ಗೆ ಭಾಗವಹಿಸಲು ಪ್ರಪಂಚದ ಎಲ್ಲ ದೇಶಗಳು ತಮ್ಮ ತಂಡಗಳನ್ನು ಕಳುಹಿಸಿ ಕೊಟ್ಟಂತೆ ಇಸ್ರೇಲ್ ತನ್ನ 28 ಕ್ರೀಡಾಪಟುಗಳ  ತಂಡವೊಂದನ್ನು ಕಳುಹಿಸಿಕೊಟ್ಟಿತ್ತು. ಹಾಗೆಯೇ ಅಂದು ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದ ಪಾಲೆಸ್ಟಿನ್ ಲಿಬರೇಷನ್ ಆರ್ಗನ್ಯೆಜೆಷನ್ (ಪಿ.ಎ ಲ್.ಓ) ತನ್ನ 8 ಜನರ ತಂಡವೊಂದನ್ನು ಕಳುಹಿಸಿಕೊಟ್ಟಿತ್ತು  ಕ್ರೀಡಾಪಟುಗಳನಲ್ಲ!!!.  ಬದಲಾಗಿ ಬ್ಲಾಕ್ ಸೆಪ್ಟೆಂಬರ್ ಎಂದು ಕರೆಯಲ್ಪಡುವ ಉಗ್ರಗಾಮಿ ಸಂಘಟನೆಯೊಂದರ ಆತ್ಮಾಹುತಿ ದಳದ ಸದಸ್ಯರನ್ನು . ಮೇ 8 ,1972 ರಲ್ಲಿ ಟೆಲ್ಅವಿಲ್ ನಲ್ಲಿ  ಸಬಿನಾ ಫ್ಲೈಟ್- 571ರ ಹೈಜಾಕ್ ಮಾಡಿದ್ದ ಈ ಸಂಘಟನೆ ಈಗ ಇನ್ನೊಂದು ಕೃತ್ಯಕ್ಕೆ ಕೈಹಾಕಿತ್ತು . ತಮಗೆ ಬೇಕಾದ ರಹಸ್ಯ ಮಾಹಿತಿಗಳು , ಶಸ್ತ್ರಾಸ್ತ್ರ ಮೊದಲಾದ ಅಗತ್ಯಗಳನ್ನು ಪೂರೈಸಲು ಇವರು ಸಂಪರ್ಕಿಸಿದ್ದು , R.A.F (ರೆಡ್ ಆರ್ಮಿ ಫಾಶನ್) ಎನ್ನುವ ಜರ್ಮನಿ ಉಗ್ರಗಾಮಿ ಸಂಘಟನೆಯನ್ನು.  

ಘಟನೆ ಆರಂಭವಾದದ್ದು ಸೆಪ್ಟೆಂಬರ್ 4, 1972 ರ ಸಂಜೆ ಸಮಯ ಸುಮಾರು 4.40 ಕ್ಕೆ  ;

ಶಸ್ತ್ರಸಜ್ಜಿತ 8 ಮಂದಿ ಬ್ಲಾಕ್ ಸೆಪ್ಟೆಂಬರ್ ನ ಉಗ್ರರು ಮ್ಯೂನಿಚ್ ಕ್ರೀಡಾಗ್ರಾಮದ ಕಟ್ಟಡವೊಂದರ ಕೊಠಡಿಯಲ್ಲಿದ್ದ ಇಸ್ರೇಲ್ ಕ್ರೀಡಾಳುಗಳತ್ತ ಹತ್ತಿ ಹೋದರು . 11ಜನರ  ಇಸ್ರೇಲ್ ತಂಡವನ್ನು ಒತ್ತೆಯಾಳುಗಳಾಗಿ ಮಾಡಿಕೊಂಡರು. ಆರಂಭದ  ಅಕ್ರಮಣದಲ್ಲೇ ಇಬ್ಬರು ಇಸ್ರೇಲ್ ಸದಸ್ಯರು ಹತ್ಯೆಯಾದರು.  ಸ್ವಲ್ಪ ಹೊತ್ತಿನಲ್ಲೇ ಸುದ್ದಿ ಹಬ್ಬಿತ್ತು , ಉಳಿದವರು ಕಟ್ಟಡ ಬಿಟ್ಟು ದೂರ ಸರಿದರು. ಸುದ್ದಿ ಇಸ್ರೇಲ್ಗೆ ಮುಟ್ಟಲು ತಡವಾಗಲಿಲ್ಲ , ಆಗ ಇಸ್ರೇಲ್ ಪ್ರಧಾನಿಯಾಗಿದ್ದವರು ಗೋಲ್ಡಾ ಮೆಯ್ರ್. ಉನ್ನತ ಮಟ್ಟದ ಸಭೆಗಳು ನಡೆದು ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಮೋಸ್ಸಾದ್ ನ ಅಧಿಕಾರಿಗಳು  ಜರ್ಮನ್ನತ್ತ ಧಾವಿಸಿದ್ದರು. ಉಗ್ರರ ಬೇಡಿಕೆಗಳನ್ನು ಕೇಳಲಾಯಿತು. ಇಸ್ರೇಲ್ ಜೈಲ್ನಲ್ಲಿರುವ 234 P.L.O ಹೋರಾಟಗಾರನ್ನು ಮತ್ತು "ರೆಡ್ ಆರ್ಮಿ ಫಾಶನ್ನ" ಸ್ಥಾಪಕರಾದ ಆಂಡ್ರೆಸ್ ಬಡೆರ್ ಮತ್ತು ಮಾಜಿ ಪತ್ರಕರ್ತೆ ಉಲ್ರಿಕೆ ಮೆಯ್ನೋಫ್ ಎಂಬ ಜರ್ಮನ್ ಪ್ರಜೆಗಳನ್ನು ಬಿಡುಗಡೆಗೊಳಿಸಬೇಕೆಂದು ಉಗ್ರರ ಬೇಡಿಕೆಯಾಗಿತ್ತು. ಇದರಲ್ಲಿ ಉಗ್ರರ ಮುಖಂಡ ಲತೀಫ್ ಅಫಿಫ್ (ಇಸ್ಸಾ) ನ 2 ಜನ ಸಹೋದರರು ಸೇರಿದ್ದರು.  ಕುಖ್ಯಾತ ಕೈದಿಗಳನ್ನು ಬಿಡುಗಡೆಗೊಳಿಸುವುದು  ಇಸ್ರೇಲ್ಗೆ ಯಾವುದೇ ಕಾರಣಕ್ಕೂ ಒಪ್ಪದ ವಿಚಾರವಾಗಿತ್ತು. ಜರ್ಮನ್ ಸರ್ಕಾರ ಉಗ್ರರಿಗೆ ಹಣದ ಆಮಿಷವೊಡ್ಡಿತ್ತು. ಉಗ್ರರು ಸೊಪ್ಪು ಹಾಕಲಿಲ್ಲ.

ಕಟ್ಟಡದಿಂದ ಉಗ್ರನೊಬ್ಬನ ಇಣುಕುನೋಟ

ಮರುದಿನ ರಾತ್ರಿ  ಉಗ್ರರು ತಮ್ಮನ್ನು ಕೈರೋಗೆ ಸಾಗಿಸಬೇಕೆಂದು ಹೊಸ ಬೇಡಿಕೆಯಿಟ್ಟರು. ಇದು ಜರ್ಮನ್ ಪೊಲೀಸರಿಗೆ ಒತ್ತೆಯಾಳುಗಳನ್ನು ಕಾಪಾಡಲು ಅವಕಾಶವೊಂದನ್ನು ಒದಗಿಸಿತು . ಅಂತೆಯೇ ಜರ್ಮನಿ ಒದಗಿಸಿದ  2 ಹೆಲಿಕಾಪ್ಟರ್ಗಳಲ್ಲಿ ಸಮೀಪದ ನ್ಯಾಟೋ  ವೈಮಾನಿಕನೆಲೆಯತ್ತ ಉಗ್ರರನ್ನು ಒತ್ತೆಯಾಳುಗಳ ಸಮೇತ ಸಾಗಿಸಿದ್ದರು. ಮ್ಯೂನಿಚ್ ನಗರ ಶಸಸ್ತ್ರದಳ ಪೊಲೀಸರು ವಿಮಾನನಿಲ್ದಾಣವನ್ನು ಸುತ್ತುವರಿದು ಕಾರ್ಯಾಚರಣೆಗೆ ತೊಡಗಿದ್ದರು. ಇವರು ಈ ತರಹದ ಕಾರ್ಯಾಚರಣೆಗೆಂದು ತರಬೇತುಗೊಂಡಿರಲಿಲ್ಲ. ಮತ್ತು ಇದಕ್ಕೆ ಬೇಕಾದ ಶಸ್ತ್ರಗಳನ್ನು ಹೊಂದಿರಲಿಲ್ಲ. ಅಲ್ಲದೆ ಉಗ್ರರ ಸಂಖ್ಯೆಯ ಬಗ್ಗೆ ಹೊಂದಿದ್ದ ಶಸ್ತ್ರಾಸ್ತ್ರಗಳ ಬಗ್ಗೆ ಖಚಿತ ಮಾಹಿತಿಯು  ಇರಲಿಲ್ಲ . ಇಸ್ರೇಲ್ನ ರಕ್ಷಣಾ ಪರಿಣಿತರು ಈ ಕಾರ್ಯಾಚರಣೆಯನ್ನು ಮೌನವಾಗಿ ವೀಕ್ಷಿಸುವಂತಾಯಿತು. ರಾತ್ರಿ 10.30 ರ ಸಮಯದಲ್ಲಿ ಹೆಲಿಕ್ಯಾಪ್ಟರ್ ನಿಲ್ದಾಣದಲ್ಲಿ ಇಳಿಯಿತು . ಮೊದಲೇ ರಹಸ್ಯ ಸ್ಥಳಗಳಲ್ಲಿ ಅವಿತಿದ್ದ  ಪೊಲೀಸರನ್ನು ಉಗ್ರರು ಕಂಡರು ,ಗುಂಡಿನ ಹೋರಾಟ ಶುರುವಾಯಿತು. ಒಬ್ಬ ಉಗ್ರ ಹೆಲಿಕಾಪ್ಟರ್ನಲ್ಲಿದ್ದ ಒತ್ತೆಯಾಳುಗಳತ್ತ ಗ್ರೆನೇಡ್ ಒಂದನ್ನು ಎಸೆದ. ಇನ್ನೊಬ್ಬ ಮತ್ತೊಂದು ಹೆಲಿಕಾಪ್ಟರ್ನಲ್ಲಿದ್ದವರತ್ತ ಗುಂಡು ಹಾರಿಸಿದ. ಪೊಲೀಸ್ ತಂಡದ ಶಾರ್ಪ್ ಶೂಟರ್ಗಳು ಉಗ್ರರನ್ನು ಬೇಟೆಯಾಡಿದ್ದರು.  ಮಧ್ಯರಾತ್ರಿ ವೇಳೆಗೆ ಕಾರ್ಯಾಚರಣೆ ಮುಕ್ತಾಯವಾಯಿತು. 2 ಹೆಲಿಕಾಪ್ಟರ್ಗಳಲ್ಲಿದ್ದ ಎಲ್ಲ 9 ಮಂದಿ ಕ್ರೀಡಾಪಟುಗಳು ಹತ್ಯೆಯಾಗಿದ್ದರು. ಪೊಲೀಸರ ಗುಂಡಿಗೆ 5 ಜನ ಉಗ್ರರು ಸಾವಿಗೀಡಾದರು. ಅಡಗಿದ್ದ 3 ಉಗ್ರರನ್ನು ಸೆರೆಹಿಡಿಯಲಾಯಿತು, ಓರ್ವ ಜರ್ಮನ್ ಪೊಲೀಸ್ ಪ್ರಾಣ ತ್ಯಜಿಸಿದ್ದರು. 

ಸುದ್ದಿ ಪ್ರಪಂಚದೆಲ್ಲೆಡೆ ಹರಡಿತು. ಒಂದು ಹಂತದಲ್ಲಿ ಒಲಿಂಪಿಕ್ ನಿಲ್ಲಿಸಲು ಯೋಜಿಸಿದ್ದರು, ಆದರೆ ಇಸ್ರೇಲ್ ಸರ್ಕಾರ ಮಧ್ಯ ಪ್ರವೇಶಿಸಿ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಒಲಿಂಪಿಕ್ ನ್ನು  ಯಶಸ್ವಿಯಾಗಿ ನಡೆಸಬೇಕೆಂದು ಹೇಳಿತು. ಕರಿಛಾಯೆಯ ನಡುವೆ ಕ್ರೀಡಾಕೂಟ ನಡೆಯಿತು. ಪೂರ್ಣ ಇಸ್ರೇಲ್ ತಂಡ ,ತಮ್ಮ ಮೃತಪಟ್ಟ ಸದಸ್ಯರೊಂದಿಗೆ ಇಸ್ರೇಲ್ಗೆ ಬಂದಿಳಿಯಿತು. ರಾಷ್ಟ್ರೀಯ  ಶೋಕದ ನಡುವೆ ಅಂತಿಮ ಸಂಸ್ಕಾರ ಕಾರ್ಯಗಳು ನಡೆದವು. ಇನ್ನು ಮೃತರಾದ 5 ಮಂದಿ ಉಗ್ರರ ಶವಗಳು ಲಿಬಿಯದತ್ತ ರವಾನೆಯಾದವು. ಅಲ್ಲಿ ಅವರಿಗೆ ಮಿಲಿಟರಿ ನಮನದೊಂದಿಗೆ ಅಂತಿಮ ವಿಧಿಗಳು ನಡೆದವು. ಏಕೆಂದರೆ ಲಿಬಿಯಾ ಸರ್ವಾಧಿಕಾರಿ ಮಮ್ಮರ್ ಗಢಾಫಿ ಪ್ರಕಾರ ಈ  ಉಗ್ರರು ಅಲ್ಲಿನ ಹೀರೋಗಳಾಗಿದ್ದರು.

ಈ ಹತ್ಯಾಕಾಂಡವು ಜರ್ಮನಿಯಲ್ಲಿ ಹಿಟ್ಲರ್ ಮಾಡಿದ ಯಹೂದಿ ಹತ್ಯೆಯ ದಿನಗಳನ್ನು ನೆನಪಿಗೆ ತಂದಿತು. ಯಹೂದಿ ದೇಶ
ಇಸ್ರೇಲ್ನಲ್ಲಿ ಪ್ರತಿಕಾರದ ಕೂಗೆದಿತ್ತು. ಮರುದಿನ ಇಸ್ರೇಲ್ ವಿಮಾನಗಳು ಲೆಬನಾನ್ ಮತ್ತು ಸಿರಿಯಾದಲ್ಲಿದ್ದ ಪ್ಯಾಲೆಸ್ತೀನ್ ನಿರಾಶ್ರೀತರ ಶಿಬಿರಗಳ ಮೇಲೆ ಬಾಂಬ್ ಧಾಳಿ ಶುರುಮಾಡಿದವು. 200 ಮಂದಿ ಅಮಾಯಕರು ಬಲಿಯಾದರು . ಇಸ್ರೇಲ್ ತಪ್ಪಿತಸ್ಥರಿಗೆ ಶಿಕ್ಷೆಯುಂಟಾಗಲು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿತ್ತು . ಪ್ರಧಾನಿ ಗೋಲ್ಡಾ ಮೆಯ್ರ್ , ರಕ್ಷಣಾ ಸಚಿವ ಮೋಶೆ ಡಯನ್ , ಮೋಸ್ಸಾದ್ ಮುಖ್ಯಸ್ಥ  ಜ್ವಿ ಝಮೀರ್ , ರಕ್ಷಣಾ ಸಲಹೆಗಾರ ಅರೋನ್ ಯರೀವ್   ಮೊದಲಾದವರು ಸೇರಿ ಒಂದು ಸಮಾಲೋಚನೆ ನಡೆಯಿತು . ಕಮಿಟಿ -X  ಎನ್ನುವ ಹೊಸ ತಂಡ ರಚನೆಯಾಯಿತು.

ಈ ಮಧ್ಯೆ  20 ನೇ ಅಕ್ಟೋಬರ್ 1972ರಂದು  ಲುಫ್ತಾನ್ಸ ಫ್ಲೈಟ್ -615  ಎಂಬ ಡಮಾಸ್ಕಸ್ ನಿಂದ ಫ್ರಾಂಕ್ಫ಼ರ್ಟ್ ಗೆ ತೆರಳುತ್ತಿದ್ದ ಪ್ರಯಾಣಿಕ ವಿಮಾನ ಅಪಹರಣವಾಯಿತು. ವಿವಿಧ ದೇಶಗಳ 13 ಪ್ರಯಾಣಿಕರು ಇದ್ದ ವಿಮಾನವನ್ನು ಮತ್ತೆ ಬ್ಲಾಕ್ ಸೆಪ್ಟೆಂಬರ್ ತಂಡದ ಇಬ್ಬರು ಅಪಹರಿಸಿದ್ದರು. ಅವರ ಬೇಡಿಕೆ ಏನೆಂದರೆ ಮ್ಯೂನೀಚ್ ಧಾಳಿಯಲ್ಲಿ ಬಂಧಿತರಾದ ಅದ್ನಾನ್ -ಅಲ್ -ಘಾಸಿ , ಜಮಾಲ್-ಅಲ್-ಘಾಸಿ  ಮತ್ತು ಮೊಹಮ್ಮದ್ ಸಫಾದಿ ಯರನ್ನು ಜೈಲಿಂದ ಬಿಡುಗಡೆಗೊಳಿಸುವುದು . ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ನಂತರ ಜರ್ಮನಿ ಇದಕ್ಕೆ ಒಪ್ಪಿತ್ತು. ಲಿಬಿಯಾದ ಟ್ರಿಪೋಲಿಯಲ್ಲಿ ಅಪಹರಣಕಾರರು ಮತ್ತು ಮ್ಯೂನಿಚ್  ಹತ್ಯಾಕಾಂಡದ ಆರೋಪಿಗಳು ಬಂದಿಳಿದಾಗ ಭವ್ಯ ಸ್ವಾಗತ ದೊರಕಿತು. ಅಂದು ಅವರು  ಮಾಡಿದ ಪತ್ರಿಕಾಗೋಷ್ಠಿ ವಿಶ್ವದಾದ್ಯಂತ ಪ್ರಸಾರವಾಯಿತು. ಅಲ್ಲಿಗೆ ಇಸ್ರೇಲ್ನ ಪ್ರತಿಷ್ಠೆಗೆ ಭಂಗವುಂಟಾಯಿತು.

ಭಾರತವು ಕೂಡ ಇಂತಹ ಸಂದರ್ಭವನ್ನು ಕಂದಹಾರ್ ವಿಮಾನ ಅಪಹರಣದಲ್ಲಿ ಕಂಡಿತ್ತು.ಭಾರತ ಉಗ್ರರ ಬೇಡಿಕೆಯನ್ನು ಒಪ್ಪಿ ಒತ್ತೆಯಾಳುಗಳನ್ನು ಬಿಡಿಸಿಕೊಂಡಿತು. ನಂತರ ಅಪಹರಣಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಿಡುಗಡೆಯಾದ ಉಗ್ರರು ಮತ್ತೆ ಭಾರತಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸಿದರು.  ಆದರೆ ಇಲ್ಲಿ ಇಸ್ರೇಲ್ ಇದಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಪ್ರತಿಜ್ಞೆ ಮಾಡಿತ್ತು ಮತ್ತು ಸಾಧಿಸಿತು. ಘಟನೆಗೆ ಕಾರಣರಾದವರನ್ನು ಹುಡುಕಿ ಜಗತ್ತಿಗೆ ಸುಳಿವು ಸಿಗದಂತೆ  ಯಮಲೋಕಕ್ಕೆ ಅಟ್ಟಿತ್ತು. ವ್ರಾತ್ ಆಫ್ ಗಾಡ್ ಎಂದು ಕರೆಯಲ್ಪಡುವ ಈ ಸಾಹಸ ಕತೆಯನ್ನು ಇನ್ನೊಂದು ಭಾಗದಲ್ಲಿ ನೋಡೋಣ.

                                                                                                                -Tharanatha Sona



ಮಾಹಿತಿ ಮತ್ತು ಚಿತ್ರಕೃಪೆ :- ಅಂತರ್ಜಾಲ


Thursday, May 11, 2017

ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ !!!! ಭಾಗ - 2

                              ಭಾಗ 2 - ವ್ರಾತ್ ಆಫ್ ಗಾಡ್  / ಆಪರೇಷನ್ ಬಯೋನೆಟ್ 


ಪ್ರಧಾನಿ ಗೋಲ್ಡಾ ಮಿರ್ ನೇತೃತ್ವದಲ್ಲಿ ರಚನೆಯಾದ ಕಮಿಟಿ- X ಹತ್ಯಾಕಾಂಡದ ರೂವಾರಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ನಿರ್ಧರಿಸಿತು. ಈ ರೂವಾರಿಗಳು ವಿವಿಧ ಉದ್ಯೋಗಗಳನ್ನು ಮಾಡುತ್ತ  ವಿಶ್ವದೆಲ್ಲೆಡೆ ಹಂಚಿ ಹೋಗಿದ್ದರು, ಇವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ಕೃತ್ಯಕ್ಕೆ ಸಹಕರಿಸಿದ್ದರು. ಇವರುಗಳನ್ನು ಸುಮ್ಮನೆ ಬಿಟ್ಟರೆ ಇನ್ನಷ್ಟು ಇಸ್ರೇಲ್ ವಿರೋಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ಸಂಭವವಿತ್ತು. ಹೀಗೆ ಬೇರೆ ದೇಶಗಳಲ್ಲಿ ಇದ್ದವರನ್ನು ಮುಗಿಸಿಬಿಡುವುದು ಸುಲಭದ ಮಾತಲ್ಲ. ಸ್ಥಳೀಯ ಕಾನೂನು , ಮಾನವ ಹಕ್ಕು, ರಾಜಕೀಯ  ಎಲ್ಲವೂ  ಅಡ್ಡಬರುತ್ತದೆ. ಎಲ್ಲಿಯೂ ಇಸ್ರೇಲ್ ಸರ್ಕಾರದ ಹೆಸರು ಕೇಳಿ ಬಾರದಂತೆ ಅನಧಿಕೃತ ತಂಡವೊಂದನ್ನು ,ಮೋಸ್ಸಾದ್ (ಇಸ್ರೇಲ್ ಬೇಹುಗಾರಿಕಾ ಪಡೆ ) ಕಟ್ಟಿತ್ತು. ಮೋಸ್ಸಾದ್ ನ ಏಜೆಂಟ್ ಮಿಚೆಲ್ ಹರಾರಿ ಎನ್ನುವವರ ನೇತೃತ್ವದಲ್ಲಿ ಅಂದಾಜು 15 ಮಂದಿಯ ಸ್ವತಂತ್ರ ತಂಡ ತಯಾರಾಯಿತು. ಈ ತಂಡಕ್ಕೆ ಮೋಸ್ಸಾದ್ ಪ್ರಪಂಚದಾದ್ಯಂತ  ಇರುವ ತನ್ನ ಏಜೆಂಟ್ಗಳನ್ನು ಬಳಸಿ ಸಂಚಿನ ಶಂಕಿತ ರೂವಾರಿಗಳ ಮಾಹಿತಿ ಒದಗಿಸಿತ್ತು. ಅಂದಾಜು 20 ಕ್ಕೂ ಹೆಚ್ಚು ಮಂದಿ ಶಂಕಿತರಿದ್ದರು. ಅಲಿ ಹಸನ್ ಸಲೇಮಿ ಎನ್ನುವಾತ ಇದರಲ್ಲಿ ಅತಿ ಮುಖ್ಯವಾಗಿದ್ದ.  ಇವರ ಕುರಿತು ಎಲ್ಲ ಮಾಹಿತಿಗಳು ಸಿಕ್ಕ ಮೇಲೆ ಪ್ಯಾರಿಸ್ ನ್ನು ಕೇಂದ್ರವಾಗಿಸಿ ಭೂಗತ ಕಾರ್ಯಾಚರಣೆಗೆ ಇಳಿದರು. 
ಇಸ್ರೇಲ್ ಪ್ರಧಾನಿ ಗೋಲ್ಡಾ ಮೆಯ್ರ್ 
ಮಿಚೆಲ್ ಹರಾರಿ 
















ಈ ತಂಡದ ಮೊದಲ ಬಲಿ ಅಬ್ದುಲ್ ವೇಲ್ ಜುವೈಟರ್ ಎನ್ನುವ ಲಿಬಿಯಾನ್ ವಿದೇಶಾಂಗ ಇಲಾಖೆಯ ದುಬಾಷಿ.  1972ರ   ಅಕ್ಟೋಬರ್ 16 ರಂದು ರಾತ್ರಿ ರೋಮ್  ನಗರದಲ್ಲಿನ ತನ್ನ ನಿವಾಸಕ್ಕೆ ಮರಳುತ್ತಿದ್ದಾಗ 11 ಸುತ್ತು  ಗುಂಡುಗಳನ್ನು (ಈ ಹನ್ನೊಂದು ಗುಂಡುಗಳು ಮ್ಯೂನಿಚ್ ನಲ್ಲಿ ಬಲಿಯಾದ 11  ಅಥ್ಲೆಟ್ಗಳಿಗಳ ನೆನಪಿಗಾಗಿ ) ಹಾರಿಸಿ ಹತ್ಯೆಮಾಡಿದ್ದರು.  ಈತ  P. L.O ದ ರೋಮ್  ಘಟಕದ ಮುಖ್ಯಸ್ಥ ಎಂದು ಮೊಸಾದ್ ನಂಬಿತ್ತು. ಅದೇ ವರ್ಷದ ಡಿಸೆಂಬರ್ 8 ರಂದು ಫ್ರಾನ್ಸ್ನಲ್ಲಿ ಮೊಹಮ್ಮದ್ ಹಾಂಶರಿ ಎನ್ನುವ P. L.O ಫ್ರಾನ್ಸ್ ಘಟಕದ ಪ್ರತಿನಿಧಿ  ಮೇಲೆ ಧಾಳಿ ಮಾಡಲಾಯಿತು. ತನ್ನನ್ನು ಪತ್ರಕರ್ತ ಎಂದು ಪರಿಚಯಿಸಿಕೊಂಡ ಏಜೆಂಟ್ ಒಬ್ಬನೊಂದಿಗೆ ಹಾಂಶರಿ ಟೆಲಿಫೋನ್ನಲ್ಲಿ ಮಾತಾಡುತ್ತಿದ್ದಾಗ , ಮೊದಲೇ ಟೆಲಿಫೋನ್ನಲ್ಲಿ  ಅಳವಡಿಸಿದ್ದ ಬಾಂಬ್ ಅನ್ನು ಟೆಲಿಫೋನ್ ಸಿಗ್ನಲ್ ಮೂಲಕ ಸ್ಪೋಟಿಸಲಾಯಿತು. ಧಾಳಿ ನಡೆದ  ತಿಂಗಳ ನಂತರ ಹಾಂಶರಿ ಆಸ್ಪತ್ರೆಯಲ್ಲಿ ಮೃತನಾದ. 1973 ರ ಜನವರಿ 24 ರಂದು ಸೈಪ್ರಸ್ ನಲ್ಲಿ ಬೆಡ್ ಕೆಳಗೆ ರಿಮೋಟ್ ಬಾಂಬ್ ಸ್ಪೋಟಿಸಿ ಹುಸೇನ್ ಅಲ್ ಬಷೀರ್ ಎನ್ನುವ ಬ್ಲಾಕ್ ಸೆಪ್ಟೆಂಬರ್ ಸಂಘಟನೆಯ ಸೈಪ್ರಸ್ ಪ್ರತಿನಿಧಿ ಹತ್ಯೆಯಾದ. ಬಸೀಲ್ ಅಲ್ ಕುಬೈಸಿ ಹೆಸರಿನ ಕಾನೂನು ಪ್ರೊಫೆಸರ್ ನ್ನು ಪ್ಯಾರಿಸ್ ನಲ್ಲಿ ಏಪ್ರಿಲ್ 6ರಂದು 12 ಸುತ್ತು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಈತ ಬ್ಲಾಕ್ ಸೆಪ್ಟೆಂಬರ್ ಸಂಘಟನೆಗೆ ಶಸ್ತ್ರಾಸ್ತ್ರ ಒದಗಿಸಿದ ಎಂದು ಮೋಸ್ಸಾದ್  ನಂಬಿದೆ.
.  

ಇಸ್ರೇಲ್ ಪ್ರಧಾನಿ ಯಾಹೂದ್ ಬರಾಕ್ 
ಏಪ್ರಿಲ್ 10 ರ ರಾತ್ರಿ  ಇಸ್ರೇಲ್ ಭಾರಿ ಕಾರ್ಯಾಚರಣೆಗೆ ಇಳಿಯಿತು. ಆಪರೇಷನ್ ಸ್ಪ್ರಿಂಗ್ ಆಫ್ ಯೂಥ್ ಎನ್ನಿಸಿಕೊಂಡ ಇದರಲ್ಲಿ ಲೆಬನಾನ್ ದೇಶದ  ಬೈರುತ್ ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ವಾಸಿಸುತ್ತಿದ್ದ ಮೊಹಮದ್ ಯೂಸಫ್ ಅಲ್ ನಜರ್ ,ಕಮಲ್ ಅದ್ವಾನ್ ಮತ್ತು ಕಮಲ್ ನಾಸೀರ್ ಎನ್ನುವ ಬ್ಲಾಕ್ ಸೆಪ್ಟೆಂಬರ್ನ ದೊಡ್ಡ ತಲೆಗಳನ್ನು ಹತ್ಯೆ ಮಾಡಿದ್ದರು. ಇಸ್ರೇಲ್ ನೌಕಾಪಡೆಯ ನೆರವು ಪಡೆದುಕೊಂಡ ಸ್ಪೆಷಲ್ ಟಾಸ್ಕ್ ಫೋರ್ಸ್ ತಂಡ ಮಹಿಳೆಯರ ವೇಷದಲ್ಲಿ ಅಪಾರ್ಟ್ಮೆಂಟ್ ಪ್ರವೇಶಿಸಿತು. ಒಸಾಮಾ ಬಿನ್ ಲಾಡೆನ್ ಹತ್ಯೆಗೆ ಇದು ಹೋಲಿಕೆಯಾಗುತ್ತದೆ.  ಗುಂಡಿನ ದಾಳಿಗೆ ಇಬ್ಬರು ಲೆಬನಾನ್ ಪೊಲೀಸರು ,  ನಜರ್ ಪತ್ನಿ ಕೂಡ ಹತ್ಯೆಯಾದರು. ಮುಂದೆ ಇಸ್ರೇಲ್ ಪ್ರಧಾನಿಯಾದ ಎಹುದ್ ಬರಾಕ್ ಟಾಸ್ಕ್ ಫೋರ್ಸ್ ಸದಸ್ಯನಾಗಿ ಇದರಲ್ಲಿ ಭಾಗವಹಿಸಿದರು. ಕಾರ್ಯಾಚರಣೆ ಪೂರ್ಣಗೊಂಡ 30 ನಿಮಿಷದಲ್ಲಿ ಟಾಸ್ಕ್ ಫೋರ್ಸ್ ತಂಡ ಲೆಬನಾನ್ ಗಡಿ ದಾಟಿದ್ದರು.


ರೆಡ್ ಪ್ರಿನ್ಸ್ ಯಾನೆ ಅಲಿ ಹಸನ್ ಸಲೇಮಿ 
ಮೊದಲಿನಿಂದಲೂ ಮೊಸಾದ್,   ಆಲಿ ಹಸನ್ ಸಲೇಮಿ ಅಥವಾ ರೆಡ್ ಪ್ರಿನ್ಸ್ ಎಂದು ಕರೆಯಲ್ಪಡುವ ವ್ಯಕ್ತಿಯ ತಲಾಶೆಯಲ್ಲಿತ್ತು. ಈತ ಮ್ಯೂನಿಚ್ ನರಮೇಧದ ಮಾಸ್ಟರ್ ಮೈಂಡ್ ಆಗಿದ್ದ. ಅಮೇರಿಕಾ ಬೇಹುಗಾರಿಕಾ ಸಂಸ್ಥೆ C.I.A ಗು ಈತ ಆಪ್ತನಾಗಿದ್ದ. ಬ್ಲಾಕ್ ಸೆಪ್ಟೆಂಬರ್ನ ಚೀಫ್ ಆಪರೇಷನ್ ಅಧಿಕಾರಿಯಾಗಿದ್ದ ಈತ ಯುರೋಪ್ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಮೊಸಾದ್  ಜೂಲೈ 21 ರಂದು ನಾರ್ವೆಯಾ ಲಿಲ್ಲಿ ಹ್ಯಾಮೆರ್ನಲ್ಲಿ ರಾತ್ರಿ ಕಾರ್ನಲ್ಲಿ ಹೋಗುತ್ತಿದ್ದಾಗ ಈತನೆಂದು ದಂಪತಿಗಳ ಮೇಲೆ ಧಾಳಿ ಮಾಡಿತು. ದುರದೃಷ್ಟವಶಾತ್ ಕಾರ್ನಲ್ಲಿ ಗರ್ಭಿಣಿ ಪತ್ನಿಯೊಂದಿಗೆ ಹೋಗುತ್ತಿದ್ದ ಆ ವ್ಯಕ್ತಿ ಅಹ್ಮದ್ ಬೌಚಿಕೀ ಎನ್ನುವ ಅಮಾಯಕ ಬರಹಗಾರನಾಗಿದ್ದ. ಅಮಾಯಕನ ಹತ್ಯೆನಂತರ ನಾರ್ವೆ ಪೊಲೀಸರು ಇಬ್ಬರು ಮಹಿಳೆಯರ ಸಹಿತ 6 ಮಂದಿ ಮೊಸಾದ್ ಏಜೆಂಟರನ್ನು ಬಂಧಿಸಿದ್ದರು. ತಂಡದ ಮುಖ್ಯಸ್ಥ ಮಿಚೆಲ್ ಹರಾರಿ ಪರಾರಿಯಾದರು. ಅಲ್ಲಿಗೆ ಈ ಸರಣಿ ಹತ್ಯೆ ಬೆಳಕಿಗೆ ಬಂತು. ಆದರೆ ಅಧಿಕೃತವಾಗಿ  ಇಸ್ರೇಲ್ ಸರ್ಕಾರ ಎಂದು ಕೂಡ  ತಾನು ನಡೆಸುತ್ತಿರುವ ರಹಸ್ಯ ಕಾರ್ಯಾಚರಣೆಯನ್ನು ಒಪ್ಪಿಕೊಳ್ಳಲಿಲ್ಲ. ಮೊಸಾದ್  1974ರ ಜನವರಿಯಲ್ಲಿ ಸಲೇಮಿಗಾಗಿ ಮತ್ತೊಮ್ಮೆ ವಿಪಲಯತ್ನವನ್ನು  ಸ್ವಿಜರ್ಲೆಂಡ್ನ ಚರ್ಚ್ ವೊಂದರಲ್ಲಿ ನಡೆಸಿತ್ತು. ಈ ಹತ್ಯಾಪ್ರಯತ್ನದ ನಂತರವು ಕೂಡ ಸಲೇಮಿ, ಪ್ಯಾಲೆಸ್ತೀನ್ ನಾಯಕ ಯಾಸಿರ್ ಅರಾಫತ್ನೊಂದಿಗೆ ವಿಶ್ವಸಂಸ್ಥೆಯ ಸಭೆಯಲ್ಲೊಮ್ಮೆ ಕಾಣಿಸಿಕೊಂಡಿದ್ದ ಎಂದರೆ ಇಸ್ರೇಲ್ಗೆ ಈತನ ಬಲಿ ಏಕೆ ಇಷ್ಟು ಮುಖ್ಯವಾಗಿತ್ತು ಎಂದು ನಿಮಗೆ ಅಂದಾಜಾಗಬಹುದು. 1978 ರಲ್ಲಿ ಈತ ಲೆಬನಾನ್ ದೇಶದ  ಜಾರ್ಜಿನ ರಿಜ್ಕ್ ಎಂಬ ಮಿಸ್ ಯೂನಿವರ್ಸ್ ಒಬ್ಬಳನ್ನು ಮದುವೆಯಾಗಿ ಬೈರುತ್ನಲ್ಲಿ ವಾಸಿಸತೊಡಗಿದ. 5 ವಿಫಲ ಹತ್ಯಾಪ್ರಯತ್ನದ ನಂತರ  ಕೊನೆಗೆ 22 ಜನವರಿ 1979 ರಂದು ಕಾರ್ ಬಾಂಬ್ ಸ್ಪೋಟದಲ್ಲಿ ಈತನನ್ನು ಹತ್ಯೆಮಾಡಲಾಯಿತು. ಸಮೀಪದಲ್ಲಿದ್ದ 4 ಜನ ಅಂಗರಕ್ಷಕರು ಬಲಿಯಾದರು  ಸಕಲ ಮಿಲಿಟರಿ ಗೌರವದೊಂದಿಗೆ ಬೈರುತ್ ನಲ್ಲಿ ನಡೆದ  ಅಂತ್ಯಕ್ರಿಯೆಗೆ 20,000 ಜನ ಭಾಗವಹಿಸಿದ್ದರು.

ಜರ್ಮನ್ ಜೈಲಿಂದ ಬಿಡುಗಡೆಯಾದ್ ಜಮಾಲ್ ಅಲ್ ಘಶಿ ,ಮೊಹಮ್ಮದ್ ಸಫಾದಿ ಮತ್ತು ಅದ್ನಾನ್ ಅಲ್ ಘಶಿ ಗಾಗಿ ಮೊಸಾದ್ ಕೊನೆಯವರೆಗೂ ಹುಡುಕಾಟ ನಡೆಸಿತ್ತು. ಇದರಲ್ಲಿ ಜಮಾಲ್ ಅಲ್ ಘಶಿ 1999ರಲ್ಲಿ " ಒನ್ ಡೇ ಇನ್ ಸೆಪ್ಟೆಂಬರ್ '' ಎನ್ನುವ ಡಾಕ್ಯುಮೆಂಟರಿಗೆ ಸಂದರ್ಶನವನ್ನು ನೀಡಿದ್ದ.  2010ರಲ್ಲಿ ಮೃತನಾದ ಅಬು ದಾವೋದ್ ಎನ್ನುವ ಮುಖ್ಯ ಸಂಚುಕೋರನಿಗೆ ಕೊನೆಯವರೆಗೆ ಮೊಸಾದ್ ಹುಡುಕಾಟ ನಡೆಸಿತ್ತು.

ಈ ಭೂಗತ ತಂಡ ಇನ್ನು ಹಲವಾರು ವ್ಯಕ್ತಿಗಳನ್ನು ರಹಸ್ಯ ಹತ್ಯೆ ಮಾಡಿದೆ ಎಂದು ನಂಬಲಾಗಿದೆ ಹಾಗು ಉಗ್ರ ಅಬು ನಿದಾಲ್ ನ ಸಂಘಟನೆಯಿಂದ ತನ್ನ ಕೆಲವು ಏಜೆಂಟರನ್ನು ಕಳೆದುಕೊಂಡಿದೆ . ಈ ಘಟನೆಗಳನ್ನು ಆಧಾರವಾಗಿಟ್ಟುಕೊಂಡು 2005 ರಲ್ಲಿ 'ಮ್ಯೂನಿಚ್' ಹೆಸರಿನ ಸಿನಿಮಾ ಬಿಡುಗಡೆಯಾಯಿತು. ಇಲ್ಲಿ ಬೇಟೆ ಮತ್ತು ಹಂತಕನ ಆಟ ಮಾತ್ರ , ಇಲ್ಲಿ ಯಾವ ನಂಬಿಕೆಯು ಕೆಲಸಕ್ಕೆ ಬರುವುದಿಲ್ಲ. ತನ್ನ ಸಹಚರರು ಹತ್ಯೆಗೀಡಾದಾಗ ಮುಂದಿನ ಬಲಿ ನಾನಾಗಿರಬಹುದೆ? ಎಂದು ಭಯಗೊಂಡು ಬದುಕಬೇಕಾದ ಅನಿವಾರ್ಯತೆ ಹಲವು ಬ್ಲಾಕ್ ಸೆಪ್ಟೆಂಬರ್ ತಂಡದ ಸದಸ್ಯರಿಗಿತ್ತು. ಇಂತಹ ವಾತಾವರಣವನ್ನು ನಿರ್ಮಿಸಿದ ಕಾರಣಕ್ಕೆ ಇಸ್ರೇಲ್ ಇಂದಿಗೂ ಉಳಿದಿದೆ. ತನ್ನ ಸಾಹಸ ಕತೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುತ್ತ.

                                                                                                            -Tharanatha Sona

ಮಾಹಿತಿ ಮತ್ತು ಚಿತ್ರಗಳು : ಅಂತರ್ಜಾಲ