Saturday, May 20, 2017

NASA ದ ಬುಡಕ್ಕೆ ಬೆಂಕಿ ಇಟ್ಟ ಪೋರ !!!


 ಜನವರಿ 26ರ  ಮುಂಜಾನೆ ಬೆಚ್ಚಗೆ ಮಲಗಿದ್ದ ಜೇಮ್ಸ್ ಇನ್ನು ಇದ್ದಿರಲಿಲ್ಲ . ಕೊನೆಯ ಹೊರಗೆ ತಾಯಿ ಕೂಗುವುದನ್ನು ಕೇಳಿ ಎಚ್ಚರಗೊಂಡ . ತಾಯಿ ಹೊರಗೆ ಯಾರೋ ನಿನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿದಾಗ ,ಏನೊಂದು ಅರ್ಥವಾಗದೆ ಕೋಣೆಯಿಂದ ಹೊರಬಂದ. ಹೊರಬಂದಾಗ ಬಂದೂಕುಧಾರಿ ಪೊಲೀಸರು , FBI (ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ - ಅಮೆರಿಕಾದ ತನಿಖಾ ಸಂಸ್ಥೆ )ಯ ವ್ಯಕ್ತಿಗಳು ಇನ್ನು ಕೆಲವರೊಂದಿಗೆ ನಿಂತಿದ್ದರು. ಆಶ್ಚರ್ಯಚಕಿತನಾದ ಜೇಮ್ಸ್ , ಏಕೆಂದರೆ ಆಗ ಅವನಿಗೆ ಕೇವಲ ಹದಿನಾರು ವರ್ಷಗಳು. ನಾಸಾ (NASA) ದ  ಬಟ್ಟೆ ತೊಟ್ಟ ಕೆಲವು ಜನರನ್ನು ಕಂಡಾಗ ಅವನಿಗೆ ವಿಷಯ ಏನೆಂದು ಹೊಳೆಯಿತು. ರಾಕೆಟ್ ನ ಬುಡಕ್ಕೆ ಬೆಂಕಿ ಇಡುವ ನಾಸಾದ ಬುಡಕ್ಕೆ ಈತ ಬೆಂಕಿ ಹಚ್ಚಿದ !!!.



ಅದು ಆಗಸ್ಟ್ 1999 ರ ಸಮಯ, ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಕೆಲವು ತಂತ್ರಜ್ಞರಿಗೆ ಏನೋ ಎಡವಟ್ಟಾದ ಸೂಚನೆ ಸಿಕ್ಕಿತ್ತು. ಅವರ ಕಂಪ್ಯೂಟರ್ಗಳಿಗೆ  ಹೊರಗಿನವರಾರೋ ಪ್ರವೇಶಿಸಿದ್ದಾರೆ ಹಾಗು ಕೆಲವು ದಾಖಲೆಗಳು ಕಳವಾಗಿದೆ. ಇದು ಸಾಮಾನ್ಯ ಸಂಗತಿ ಆಗಿರಲಿಲ್ಲ. ಅಲ್ಲಿರುವ ಕಂಪ್ಯೂಟರ್ಗಳು ಉಪಗ್ರಹ ಸಂವಹನ , ನಿಯಂತ್ರಣ ಕೆಲಸಕ್ಕೆ ಮೀಸಲಿರಿಸಿರುವಂತಹದು.  ಹೊರಗಿನಿಂದ ಒಂದು ಹುಳು ಸಹ ನಾಸಾ ಕೇಂದ್ರಕ್ಕೆ ಪ್ರವೇಶ ಮಾಡುವುದು ಕಷ್ಟವಿತ್ತು. ಅಂತಹದ್ದರಲ್ಲಿ ಮೇಧಾನಿ ವಿಜ್ಞಾನಿಗಳಿದ್ದ ಸಂಸ್ಥೆಯ  ಕಂಪ್ಯೂಟರ್ಗೆ ಯಾರೋ ಕನ್ನ ಕೊರೆಯುವುದೆಂದರೇನು?.  ಕೊನೆಗೆ ಮೂರು ವಾರಗಳ ಕಾಲ ಆ ಕಂಪ್ಯೂಟರ್ಗಳನ್ನು ಸ್ಥಗಿತಗೊಳಿಸಿ ಕೂಲಂಕುಷ ತನಿಖೆಗೆ ಒಳಪಡಿಸಿದ್ದರು. ಅಲ್ಲಿಗೆ ಸುಮಾರು 41,000 ಡಾಲರ್ ವೆಚ್ಚವಾಗಿತ್ತು, ತಂತ್ರಜ್ಞರ ತಲೆಯು ಬಿಸಿಯಾಗಿತ್ತು.

ತನಿಖೆಯಿಂದ ತಿಳಿದು ಬಂದದ್ದೇನೆಂದರೆ, ಅಮೆರಿಕಾದ DARA (Defense Threat Reduction Agency) ಎನ್ನುವ ಭದ್ರತಾ ಸಂಸ್ಥೆಯ ಸುಮಾರು ಹತ್ತು ಕಂಪ್ಯೂಟರ್ಗಳನ್ನು ಯಾರೋ ಹ್ಯಾಕ್ ಮಾಡಿದ್ದರು. c0mrade ಎಂಬ ನಾಮದಿಂದ ನೆಟ್ ವರ್ಕ್ ನ ಸುರಕ್ಷತೆಗೆ ಕನ್ನ ಕೊರೆದು ಒಳನುಗ್ಗಿದ ಅವರು, ಉದ್ಯೋಗಿಗಳ ಬಳಕೆದಾರ ಹೆಸರು ಹಾಗು ಪಾಸ್ವರ್ಡ್ ಕದ್ದಿದ್ದರು. ಅಲ್ಲದೆ ಕೆಲವು ಗೌಪ್ಯ ಸಂದೇಶಗಳನ್ನು ಓದಿದ್ದರು . ಇದರಿಂದ ಇನ್ನೊಂದು ಸರ್ಕಾರಿ  ಸಂಸ್ಥೆ ನಾಸಾದ  ಕಂಪ್ಯೂಟರ್ಗೆ ನುಗ್ಗಲು ಸಾಧ್ಯವಾಯಿತು. ಹೀಗೆ ಪ್ರವೇಶ ಪಡೆದ  ನಂತರ ಅಲ್ಲಿದ್ದ ಕೆಲವು ಮಾಹಿತಿಗಳನ್ನು ಕದ್ದಿದ್ದರು. ಇದರಲ್ಲಿ ನಾಸಾದ ನಿಯಂತ್ರಣದಲ್ಲಿರುವ ಬಾಹ್ಯಾಕಾಶ ನಿಲ್ದಾಣದ ಸಾಫ್ಟ್ವೇರ್ ಕೂಡ ಸೇರಿತ್ತು. ಈ ಸಾಫ್ಟ್ವೇರ್ ಬಾಹ್ಯಾಕಾಶ ನಿಲ್ದಾಣದ ಒಳಗಿರುವ ತಾಪಮಾನ , ತೇವಾಂಶ ಮೊದಲಾದ ವಾತಾವರಣ ಸಂಬಂಧಿ ಕೆಲಸಗಳನ್ನು ನಿಯಂತ್ರಿಸುತ್ತಿತ್ತು . ಭಾರಿ ಬೆಲೆಬಾಳುವ ಈ ಸಾಫ್ಟ್ವೇರ್ನ ಸೊರ್ಸ್ ಕೋಡ್( Source Code)  ಕದ್ದ ದುಷ್ಕರ್ಮಿಗಳನ್ನು ಹುಡುಕುವುದು ಅನಿವಾರ್ಯವಾಗಿತ್ತು.



ಜೊನಾಥನ್ ಜೇಮ್ಸ್ 

ಎರಡು ಸಾವಿರನೇ ಇಸವಿಯ ಜನವರಿ 26 ರಂದು  ತನಿಖೆ ಮಾಡುತ್ತಾ ಹೋದ ತನಿಖಾ ಸಂಸ್ಥೆಗಳು ಕೊನೆಗೆ  ನಿಂತದ್ದು ,ಹದಿನಾರು ವರ್ಷದ ಜೊನಾಥನ್ ಜೇಮ್ಸ್ ಮನೆಯ ಮುಂದೆ. ಭಾರಿ ಸುರಕ್ಷತಾ ಕ್ರಮ ಹೊಂದಿದ್ದ ಸಂಸ್ಥೆಯ ಕಂಪ್ಯೂಟರ್ಗೆ 16 ವರ್ಷದ ಪೋರನೊಬ್ಬ ತನ್ನ ಸಾಮಾನ್ಯ ಪೆಂಟಿಯಂ ಆವೃತ್ತಿಯ ಗಣಕ ಬಳಸಿ  ಲಗ್ಗೆ ಇಟ್ಟಿದ್ದ. ಅವನನ್ನು ವಿಚಾರಣೆಗೆ ಒಳಪಡಿಸಿ ಅವನಲ್ಲಿದ್ದ 5 ಕಂಪ್ಯೂಟರ್, ಸಿಡಿಗಳು  ಸೇರಿದಂತೆ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡರು. ವಿಚಾರಣೆ ಮಾಡಿದಾಗ ತನ್ನ ತಪ್ಪನ್ನು ಒಪ್ಪಿಕೊಂಡ . ಇನ್ನು ವಯಸ್ಕನಾಗದ ಕಾರಣ 6 ತಿಂಗಳು ಗೃಹಬಂಧನದಲ್ಲಿ ಇರಿಸಿ, ಕಂಪ್ಯೂಟರ್ನ ಬಳಕೆಯನ್ನು ಪ್ರತಿಬಂಧಿಸಿದರು. ಕೊನೆಗೆ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಿದ್ದರು. 



1983ರಲ್ಲಿ ಹುಟ್ಟಿದ್ದ ಜೇಮ್ಸ್ 6 ವರ್ಷದ ಬಾಲಕನಾಗಿದ್ದಾಗಲೇ ಕಂಪ್ಯೂಟರ್ ಬಳಸಲು ಆರಂಭಿಸಿದ. ಒಮ್ಮೆ ಇವನ ಕಂಪ್ಯೂಟರ್ ಬಳಕೆ ಅತಿಯಾಯಿತೆಂದು , ಇನ್ನು ಕಂಪ್ಯೂಟರ್ ಬಳಸಬಾರದೆಂದು ತಂದೆ ರೇಗಿದಾಗ ರಚ್ಚೆ ಹಿಡಿದು ಮನೆ ಬಿಟ್ಟು ಓದಿ ಹೋಗಿದ್ದ. ಹೀಗೆ ಕಂಪ್ಯೂಟರ್ ಹುಚ್ಚು ಹಿಡಿಸಿಕೊಂಡಿದಾತನಿಗೆ ಯೂನಿಕ್ಸ್ (Unix) ಹಾಗು ಸಿ(C)  ಭಾಷೆಯಲ್ಲಿ ಪರಿಣತಿಯಿತ್ತು. ಇದನ್ನು ನಾಸಾದ ಮೇಲೆ ಪ್ರಯೋಗಿಸಿ ತನ್ನ ಜೀವನವನ್ನು ಹಾಳು ಮಾಡಿಕೊಂಡ.


ಈ ಘಟನೆಯ ನಂತರ ನಡೆದ ಸಂದರ್ಶನದಲ್ಲಿ ಆತ ಹೇಳಿದಿಷ್ಟು '' ನಾಸಾದ ಕಂಪ್ಯೂಟರ್ಗಳು ಸಾಕಷ್ಟು ಸುರಕ್ಷಿತವಾಗಿಲ್ಲೆಂದು ನಾನು ಮೊದಲೇ ಅದರ ಗಣಕ ವಿಭಾಗದ ಮುಖ್ಯಸ್ಥರಿಗೆ ತಿಳಿಸಿದ್ದೆ. ಅವರು ಅದರ ಬಗ್ಗೆ ನಿರ್ಲಕ್ಷ ತೋರಿದ್ದರಿಂದ ನಾನು ಈ ಕೆಲಸ ಮಾಡಿದೆ''. ತಾನು ಕೇವಲ ಕುತೂಹಲಕ್ಕಾಗಿ ಹ್ಯಾಕ್ ಮಾಡಿದ್ದೆಂದು, ಆ ಸಾಫ್ಟ್ವೇರ್ ನ ಸೊರ್ಸ್ ಕೋಡ್ ನ್ನು ಅಧ್ಯಯನಕ್ಕಾಗಿ ಬಳಸಿಕೊಂಡೆನೆಂದು  ಹೇಳಿದ.


ಹೀಗಿರುವಾಗ 2008ನೇ ಜನವರಿ 17 ರಂದು ಅಮೇರಿಕಾದಲ್ಲಿ ಬೃಹತ್ ಸೈಬರ್ ಧಾಳಿ ನಡೆಯಿತು. TJX ಎನ್ನುವ ಗೃಹಪಯೋಗಿ ವಸ್ತು ತಯಾರಿಕಾ ಸಂಸ್ಥೆ, ಬೋಸ್ಟನ್ ಮಾರ್ಕೆಟ್ ,ಆಫೀಸ್ ಮ್ಯಾಕ್ಸ್ ಎನ್ನುವ ಸಂಸ್ಥೆಗಳ ಸರ್ವರ್ಗಳಿಗೆ ದುಷ್ಕರ್ಮಿಗಳು ಧಾಳಿ ನಡಿಸಿದ್ದರು, ಹಾಗು ಈ  ಧಾಳಿಯ ಸಮಯ  ಸರ್ವರ್ಗಳಲ್ಲಿ ಶೇಖರವಾಗಿದ್ದ  ಗ್ರಾಹಕರ ಖಾಸಗಿ ಮಾಹಿತಿ ಹಾಗು ಕ್ರೆಡಿಟ್ ಕಾರ್ಡ್ನ ಮಾಹಿತಿಗಳನ್ನು ಕದ್ದಿದ್ದರು.  ಪೊಲೀಸರು ಮತ್ತೆ ಜೇಮ್ಸ್ ಮೇಲೆ ಸಂದೇಹ ಪಟ್ಟರು ಮತ್ತು ಅವನ ಸಂಬಂಧಿಕರ ಮನೆಗಳ ಮೇಲೂ ಧಾಳಿ ಮಾಡಿದ್ದರು. ಆದರೆ ಜೇಮ್ಸ್ ನ ಪಾಲ್ಗೊಳ್ಳುವಿಕೆ ಬಗ್ಗೆ ಸೂಕ್ತ ಸಾಕ್ಷ್ಯಧಾರಗಳು ದೊರೆಯಲಿಲ್ಲ. ಈ ಘಟನೆಗಳಿಂದ  ಮಾನಸಿಕವಾಗಿ ಕುಗ್ಗಿ ಹೋದ ಜೇಮ್ಸ್ ಕೊನೆಗೆ ಮೇ ಹದಿನೆಂಟು, 2008 ರಂದು ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ಅವನು ಬರೆದಿಟ್ಟ ಆತ್ಮಹತ್ಯಾ ಪತ್ರದಲ್ಲಿ  ಘಟನೆಗೂ ತನಗೂ ಸಂಬಂಧವಿಲ್ಲವೆಂದು , ತನಗೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲವೆಂದು , ನಾನು ಘಟಿಸಿದ ಸಂಗತಿಗಳ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದು, ಆತ್ಮಹತ್ಯೆಯೊಂದೇ ನನಗೆ ಆಯ್ಕೆಯಾಗಿದೆ ಎಂದು ಬರೆದಿದ್ದ . ' TJX ಸೈಬರ್  ಧಾಳಿಯಲ್ಲಿ ಅವನ ಕೈವಾಡವಿರಲಿಲ್ಲ ಮತ್ತು  ಅವನ ಬಳಿ ಸಾಕಷ್ಟು ಹಣವಿರಲಿಲ್ಲ'  ಎಂದು ಅವನ ತಂದೆ ಹೇಳುತ್ತಾರೆ. ಆ ವೇಳೆಗಾಗಲೇ ಜೇಮ್ಸ್, ಕ್ಯಾನ್ಸರ್ ನಿಂದಾಗಿ  ತನ್ನ ತಾಯಿಯನ್ನು ಕಳೆದುಕೊಂಡಿದ್ದ.

ತಪ್ಪಾದ ದಾರಿ ಒಬ್ಬ ಬುದ್ದಿವಂತನನ್ನು ಎಳೆವಯಸ್ಸಿನಲ್ಲೇ ಅವನತಿಗೆ ತಲುಪಿಸಿತು. ಹರೆಯದ ವಯಸ್ಸಿನ ಹುಚ್ಚು ಸಾಹಸವೊಂದು ಅವನ ಬದುಕಿಗೆ ಕೊಳ್ಳಿಯಾಯಿತು . ಇಂದಿಗೂ ಜಗತ್ತು ಅವನನ್ನು ಟಾಪ್-5 ಹ್ಯಾಕರ್ಗಳಲ್ಲಿ ಒಬ್ಬ ಎಂದು ಗುರುತಿಸುತ್ತದೆ.  ಈ ಘಟನೆಗಳ ನಂತರ ಇಂತಹ ಹ್ಯಾಕರ್ಗಳ ಪ್ರತಿಭೆಯನ್ನು(?) ಗುರುತಿಸಿ ಸೈಬರ್ ಭದ್ರತಾ ಸಂಸ್ಥೆಗಳು ಅವರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಂಡಿವೆ. ಕಳ್ಳರ ದಾರಿ ಇನ್ನೊಬ್ಬ ಮಾತ್ರ ಗೊತ್ತು ಅಲ್ಲವೇ ?.

ಮಾಹಿತಿ ಮತ್ತು ಚಿತ್ರಕೃಪೆ ::- ಅಂತರ್ಜಾಲ
                                                                                                        - Tharanatha Sona